ವಾಸಿಸಲು ಸ್ವಂತ ಮನೆ ಇಲ್ಲದೇ ಕಷ್ಠಪಡುತ್ತಿದ್ದ ಬಡ ಮಹಿಳೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹೊಸ ಮನೆ ನಿರ್ಮಾಣಕ್ಕೆ ಆರ್ಥಿಕ ಸಹಕಾರ ನೀಡಿ ಆಸರೆಯಾಗಿದೆ.

ಸುಳ್ಯ ತಾಲ್ಲೂಕಿನ ನಾಲ್ಕೂರು ಗ್ರಾಮದ ಯಮುನಾ ಅಮೆ(62) ಇವರು ಸ್ವಂತ ಮನೆ ಹೊಂದಿರಲಿಲ್ಲ. ವಾಸದ ಮನೆ ಇಲ್ಲದೇ ಬಹಳ ಕಷ್ಠಪಡುತ್ತಿದ್ದರು. ಮನೆ ಕಟ್ಟಿಕೊಳ್ಳೋಣವೆಂದರೆ ಬಡತನ. ಆರ್ಥಿಕವಾಗಿ ಸದೃಢರಲ್ಲದ ಇವರು ಸ್ವಂತ ಮನೆ ಕಟ್ಟಿಕೊಳ್ಳುವ ಆಲೋಚನೆ ಮಾಡಿರಲಿಲ್ಲ. ಉಳಿದುಕೊಳ್ಳಲು ಸಂಬಂಧಿಕರ ಮನೆಯ ಆಶ್ರಯವನ್ನು ಕೇಳುತ್ತಿದ್ದರು. ಗ್ರಾಮದ ಸುತ್ತಲಿನ ಮನೆ ಕೆಲಸಕ್ಕೆ ಹೋಗುವ ಇವರು ಕೆಲವೊಮ್ಮೆ ಕೆಲಸ ನೀಡಿದವರ ಮನೆಯಲ್ಲಿ ಉಳಿದುಕೊಳ್ಳುತ್ತಿದ್ದರು.

ಇವರಿಗೆ ಸ್ವಂತ ಜಾಗವಿತ್ತು. ಆದರೆ ಗುಡ್ಡ ಪ್ರದೇಶವಾಗಿರುವುದರಿಂದ ಮನೆ ಕಟ್ಟಲು ಸಾಧ್ಯವಾಗುತ್ತಿರಲಿಲ್ಲ. ಸಮತಟ್ಟು ಮಾಡಬೇಕಾಗಿತ್ತು. ಓಡಾಡಲು ದಾರಿಯೂ ಇರಲಿಲ್ಲ. ಮನೆ ನಿರ್ಮಿಸುವ ಮೊದಲು ಖರ್ಚಿನ ದಾರಿ ಹಲವಿದ್ದವು.
ತನ್ನದೇ ಆದ ಸ್ವಂತ ಮನೆ ಹೊಂದಬೇಕೆನ್ನುವ ಕನಸು ಕಟ್ಟಿಕೊಂಡ ಇವರು ಆರ್ಥಿಕ ಬಲ ಇಲ್ಲದಿದ್ದರೂ ಇಳಿ ವಯಸ್ಸಿನಲ್ಲಿ ಇನ್ನೊಬ್ಬರ ಮನೆಯಲ್ಲಿ ವಾಸವಾಗುವುದು ಕಷ್ಠವೆನಿಸಿ ಹೊಸ ಮನೆ ಕಟ್ಟುವ ಹಂಬಲವನ್ನು ಹೊಂದಿದ್ದರು. ನೂತನ ಮನೆಯ ಕನಸು ಕಾಣುತ್ತಿದ್ದರು.

ತಮ್ಮ ಮನೆ ನಿರ್ಮಾಣದ ಕನಸನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವಸಹಾಯ ಸಂಘದ ಸಭೆಯಲ್ಲಿ ಹೇಳಿಕೊಂಡಾಗ ಯೋಜನೆಯ ಮಹಾಲಕ್ಷ್ಮೀ ಸ್ವಸಹಾಯ ಸಂಘದ ಸದಸ್ಯರಾದ ಇವರಿಗೆ ಕಾರ್ಯಕರ್ತರು ಸ್ಪಂದಿಸಿದರು. ಇವರೆದುರಿಸುತ್ತಿರುವ ಕಷ್ಠವನ್ನು ಮನಗಂಡು ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಪೂಜ್ಯ ಖಾವಂದರಿಗೆ ಆರ್ಥಿಕ ಸಹಕಾರ ನೀಡುವಂತೆ ಮನವಿ ಮಾಡಿಕೊಂಡಿದ್ದರು. ಪರಿಣಾಮವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ರೂ. 30,000 ಮಂಜೂರಾಯಿತು. ಮನೆ ನಿರ್ಮಾಣದ ಕಾರ್ಯವೂ ಆರಂಭವಾಯಿತು.
ಮನೆ ಕಟ್ಟುವ ಮೊದಲು ಹಲವು ಕೆಲಸಗಳಿದ್ದವು. ಮನೆ ನಿರ್ಮಾಣದ ಸ್ಥಳ ಸಮತಟ್ಟಾಗಬೇಕು. ಕಟ್ಟಡಕ್ಕೆ ಅಗತ್ಯ ವಸ್ತುಗಳು ಸ್ಥಳಕ್ಕೆ ತರಬೇಕಾದರೆ ವಾಹನ ಬರುವಂತೆ ದಾರಿ ಮಾಡಿಕೊಳ್ಳಬೇಕು. ಇವೆಲ್ಲಾ ಖರ್ಚಿನ ಬಾಪ್ತು.. ಇವುಗಳಿಗೆಂದೇ ತಾವಿರುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಹಾಲಕ್ಷ್ಮೀ ಸ್ವಸಹಾಯ ಸಂಘದಿಂದ ಆರ್ಥಿಕ ನೆರವನ್ನೂ ಪಡೆದುಕೊಂಡಿರುತ್ತಾರೆ.

ಮನೆ ಕಟ್ಟುವ ಎಲ್ಲಾ ಕೆಲಸಗಳನ್ನು ಹಣ ಕೊಟ್ಟು ಮಾಡಿಸುವ ಸಾಮರ್ಥ್ಯ ಇವರಿಗಿರಲಿಲ್ಲ. ಶ್ರೀ ಕ್ಷೇತ್ರ ಧರ್ಮಸ್ಥಳದ ಶೌರ್ಯ ತಂಡದ ನೆರವನ್ನು ಅಪೇಕ್ಷಿಸಿ ಯೋಜನಾಧಿಕಾರಿಯವರಲ್ಲಿ ಮನವಿ ಮಾಡಿಕೊಂಡರು. ಸಕಾರಾತ್ಮಕ ಸ್ಪಂದನೆ ದೊರೆಯಿತು. ಸ್ಥಳೀಯ ನಾಲ್ಕೂರು ‘ಶೌರ್ಯ’ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ತಂಡದ ಸ್ವಯಂಸೇವಕರು ಕೆಲಸ ಆರಂಭಿಸಿದರು.
ಗುಡ್ಡ ಕಡಿದು ದಾರಿ ಮಾಡುವ ಮತ್ತು ಮನೆ ನಿರ್ಮಾಣದ ಸ್ಥಳವನ್ನು ಮಟ್ಟ ಮಾಡುವ ಕೆಲಸ ಜೆ.ಸಿ.ಬಿ ಮೂಲಕವೇ ಅನಿವಾರ್ಯವಾಗಿ ಮಾಡಿಸಿದರು. ಅಡಿಪಾಯಕ್ಕೆ ತಗ್ಗು ತೆಗೆಯುವುದು, ಕಲ್ಲು ಕಟ್ಟುವುದು ಮಣ್ಣು ತುಂಬುವ ಕೆಲಸಗಳನ್ನು ಶೌರ್ಯ ತಂಡದ ಸದಸ್ಯರು ಮಾಡಿದರು. ಗೋಡೆ ಕಟ್ಟುವ ಕೆಲಸ, ಮೇಲ್ಚಾವಣಿ ರಚನೆ, ವಿದ್ಯುತ್ ಸಂಪರ್ಕ, ಶೀಟ್ ಹೊದಿಕೆ, ಬಣ್ಣ ಬಳಿಯುವುದು, ಶೌಚಾಲಯದ ಗುಂಡಿ ತೆಗೆಯುವುದು, ಶೌಚಾಲಯ ಕಟ್ಟಡ ರಚನೆ ಎಲ್ಲಾ ಕೆಲಸಗಳನ್ನು ಶೌರ್ಯ ತಂಡದವರು ಮಾಡಿಕೊಟ್ಟರು. ಯಮುನಾ ರವರು ಸ್ವಯಂಸೇವಕರೊಂದಿಗೆ ದುಡಿಮೆಗಿಳಿದರು. ಇವರ ಸಂಬಂಧಿಕರು ಸಹ ಕೈಜೋಡಿಸಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಕಳೆದ ಆರು ವರ್ಷದ ಹಿಂದೆ ರಚನೆ ಮಾಡಲಾದ ನಾಲ್ಕೂರು ಶೌರ್ಯ ತಂಡವು ಸಾಮಾಜಿಕ ಸೇವೆ ಹಾಗೂ ವಿಪತ್ತು ನಿರ್ವಹಣಾ ಸೇವೆಯಲ್ಲಿ ಸಕ್ರೀಯವಾಗಿದೆ. 16 ಮಂದಿ ಸದಸ್ಯರಿರುವ ಈ ಘಟಕದಲ್ಲಿ ಗಾರೆ ಕೆಲಸ ಮಾಡುವವರು, ಕಟ್ಟಡ ಕೆಲಸದಲ್ಲಿ ಅನುಭವ ಹೊಂದಿರುವವರು, ಕಾರ್ಪೆಂಟರ್ ಕೆಲಸದವರು, ಇಲೆಕ್ಟ್ರೀಷಿಯನ್ ಕೆಲಸ ಗೊತ್ತಿರುವವರು, ಪೇಂಟರ್ ಹೀಗೆ ಹಲವು ವಿಧದ ಕೌಶಲ್ಯ ಹೊಂದಿರುವ ಸ್ವಯಂಸೇವಕರಿದ್ದಾರೆ. ವಿವಿಧ ಕೌಶಲ್ಯ ಹೊಂದಿರುವ ಸೇವಾ ಮನೋಭಾವವಿರುವ, ಕಷ್ಠದಲ್ಲಿರುವವರಿಗೆ ಸ್ಪಂದಿಸಲು ಸ್ವಯಂ ಪ್ರೇರಣೆಯಿಂದ ಮುಂದಾಗುವ ಸ್ವಯಂಸೇವಕರ ಬಳಗ ಇದಾಗಿರುವುದರಿಂದ ಮನೆ ನಿರ್ಮಾಣದ ಕೆಲಸ ಕಠಿಣವೆನಿಸಲಿಲ್ಲ.
ಮನೆ ಕಟ್ಟಡ ಪೂರ್ಣಗೊಳ್ಳುವವರೆಗೆ ಸುಮಾರು 15 ದಿನಗಳ ಕಾಲ ಸ್ವಯಂಸೇವಕರು ಶ್ರಮದಾನ ಮಾಡಿದ್ದಾರೆ. ತಮ್ಮ ತಮ್ಮ ವೈಯಕ್ತಿಕ ದುಡಿಮೆಯನ್ನು ನೋಡಿಕೊಂಡು ಸಾಮಾಜಿಕ ಕಳಕಳಿಯ ಕೆಲಸವನ್ನೂ ಮಾಡಬೇಕಾಗಿರುವುದರಿಂದ ಸಂಜೆ ತಮ್ಮ ಕೆಲಸಗಳನ್ನು ಮುಗಿಸಿಕೊಂಡು ಬಂದು ಮನೆ ರಚನೆಗೆ ಕೆಲಸ ಮಾಡಿರುತ್ತಾರೆ. ವಿದ್ಯುತ್ ದೀಪದ ಬೆಳಕಿನಲ್ಲಿ ರಾತ್ರಿ 10 ಗಂಟೆಯವರೆಗೂ ಕೆಲಸ ಮಾಡಿ ಸಾಮಾಜಿಕ ಪ್ರಜ್ಞೆ ಮೆರೆದಿದ್ದಾರೆ.

ಮನೆ ಕಟ್ಟಡ ಪೂರ್ಣಗೊಳ್ಳುತ್ತಿದ್ದಂತೆಯೇ ಮನೆಯ ಹಸ್ತಾಂತರ ಕಾರ್ಯ ದಿನಾಂಕ: 18.06.2026.ರಂದು ನಡೆಯಿತು. ತಾಲ್ಲೂಕು ಯೋಜನಾಧಿಕಾರಿಯವರಾದ ಮಾಧವ ಗೌಡ ರವರು ನೂತನ ಗೃಹ “ಶ್ರೀ ಲಕ್ಷ್ಮೀ ನಿಲಯ”ದ ನಾಮ ಫಲಕ ಅನಾವರಣ ಗೊಳಿಸಿ, ದೀಪ ಬೆಳಗಿಸಿ ಮನೆಯನ್ನು ಹಸ್ತಾಂತರಿಸಿದರು.
“ಮಂಜುನಾಥ ಸ್ವಾಮಿಯ ಅನುಗ್ರಹದಿಂದ ನನಗೆ ಹೊಸ ಮನೆಯಲ್ಲಿ ಉಳಿದುಕೊಳ್ಳುವ ಅವಕಾಶ ಒದಗಿಬಂತು. ನಾನು ಧರ್ಮಸ್ಥಳ ಸಂಘದಲ್ಲಿ 2005 ರಿಂದಲೂ ಇದ್ದೇನೆ. ನಮ್ಮ ಸಂಘದ ಹೆಸರು ಶ್ರೀ ಮಹಾಲಕ್ಷ್ಮೀ. ಧರ್ಮಸ್ಥಳ ಸಂಘದಲ್ಲಿರುವುದರಿಂದ ನನಗೆ ಮನೆ ಕಟ್ಟಲು ಪೂಜ್ಯರಿಂದ ಆಶೀರ್ವಾದ ಸಿಕ್ಕಿತು. ಇದಕ್ಕಾಗಿಯೇ ನಾನು ನನ್ನ ಮನೆಗೆ ‘ಶ್ರೀ ಮಹಾಲಕ್ಷ್ಮೀ ನಿಲಯ’ ಎಂದು ಹೆಸರು ಇಟ್ಟಿದ್ದೇನೆ” ಎನ್ನುತ್ತಾರೆ ಯಮುನಾ ಅಮೆ.

“ಮನೆ ಕಟ್ಟಲು ಸಾದ್ಯವಾಗದೇ ಇರುವ ಕುಟುಂಬಕ್ಕೆ ವಾಸಕ್ಕೆ ಯೋಗ್ಯವಾದ ಮನೆಯನ್ನು ಕಟ್ಟಲು ಪ್ರಾಮಾಣಿಕ ಪ್ರಯತ್ನವನ್ನು ಘಟಕದ ಸದಸ್ಯರೆಲ್ಲರೂ ಮಾಡಿದ್ದೇವೆ. ಮನೆ ಪೂರ್ಣಗೊಳ್ಳುವುದರ ಮೂಲಕ ನಮ್ಮೆಲ್ಲರ ಶ್ರಮ ಸಾರ್ಥಕವಾಗಿದೆ. ಶೌರ್ಯ ತಂಡದಲ್ಲಿ ಇರುವುದರಿಂದ ಮಾತ್ರ ನಮಗೆ ಇಂತಹ ಸೇವೆ ಸಲ್ಲಿಸಲು ಅವಕಾಶ ಒದಗಿಬಂತು” ಎನ್ನುತ್ತಾರೆ ಸುಳ್ಯ ತಾಲ್ಲೂಕು ವಿಪತ್ತು ನಿರ್ವಹಣಾ ಸಮಿತಿಯ ಕ್ಯಾಪ್ಟನ್ ಸತೀಶ್ ಬಂಬುಳಿ.
ಮನೆ ನಿರ್ಮಾಣ ಕಾರ್ಯದಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ವಲಯ ಮೇಲ್ವಿಚಾರಕ ರಾಜೇಶ್ ಇವರು ಸ್ವಯಂಸೇವಕರಿಗೆ ಪ್ರೇರಣೆ ನೀಡಿದ್ದಾರೆ. ಘಟಕದ ಸದಸ್ಯರ ಜೊತೆಯಾಗಿ ದುಡಿದಿದ್ದಾರೆ. ಪರಿಣಾಮವಾಗಿ ಮನೆಯಿಲ್ಲದೇ ವಾಸವಾಗಿದ್ದ ಯಮುನಾ ಇವರಿಗೆ ಕನಸಿನ ಮನೆ ಸಿದ್ದಗೊಂಡಿದೆ.